ಹೊನ್ನಾವರ
 	ಭಾರತದ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಉತ್ತರಕ್ಕೆ ಕುಮಟ, ದಕ್ಷಿಣಕ್ಕೆ ಭಟ್ಕಳ ತಾಲ್ಲೂಕುಗಳೂ ಪೂರ್ವದಲ್ಲಿ ಸಿದ್ದಾಪುರ ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕುಗಳೂ ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಸುತ್ತುವರಿದಿವೆ. ಮಂಕಿ, ಮಾವಿನಕುರ್ವೆ, ಹೊನ್ನಾವರ ಹೋಬಳಿಗಳು. 93 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 744 ಚ.ಕಿಮೀ. ಜನಸಂಖ್ಯೆ 1,60,299.

	ಕರಾವಳಿ ತೀರದ ಈ ತಾಲ್ಲೂಕಿನ ಉತ್ತರ ಭಾಗದಲ್ಲಿ ಪ್ರಾರಂಭವಾ ಗುವ ಜಂಬುಮಣ್ಣಿನ ಮೈದಾನ ಪ್ರದೇಶ ದಕ್ಷಿಣದಲ್ಲಿ ಮಂಕಿವರೆಗೂ ಪಶ್ಚಿಮಕ್ಕೆ ಹೊನ್ನಾವರದವರೆಗೂ ಹರಡಿದ್ದು ಅಲ್ಲಿಂದ ಮುಂದೆ ಪಶ್ಚಿಮಕ್ಕೆ ಹೋದಂತೆ ತೀರದಲ್ಲಿ ಮರಳು ಮಿಶ್ರಿತ ಭೂಮಿ ಮತ್ತು ಮರಳು ಭೂಮಿಯನ್ನು ಕಾಣಬಹುದು. ಬೆಟ್ಟಗುಡ್ಡ ಪ್ರದೇಶಗಳಲ್ಲಿ ಕೆಂಪುಮಣ್ಣಿನ ಭೂಮಿ ಇದೆ. ತಾಲ್ಲೂಕಿನಲ್ಲಿ ಹರಿಯುವ ನದಿಗಳಲ್ಲಿ ಶರಾವತಿ ಪ್ರಮುಖವಾದದ್ದು. ಇದು ಪೂರ್ವದಿಂದ ಪಶ್ಚಿಮಾಭಿಮುಖವಾಗಿ ತಾಲ್ಲೂಕಿನ ಮಧ್ಯದಲ್ಲಿ ಹರಿದು ಹೊನ್ನಾವರದ ದಕ್ಷಿಣಕ್ಕೆ ಅರಬ್ಬೀ ಸಮುದ್ರ ಸೇರುತ್ತದೆ. ಕಲಕಟ್ಟಿ, ತುಳುಸಾನಿ, ದೊಡ್ಡಮನೆ ಮೊದಲಾದ ಸಣ್ಣಪುಟ್ಟ ಹೊಳೆಗಳೂ ಅನೇಕ ಝರಿಗಳೂ ಈ ತಾಲ್ಲೂಕಿನಲ್ಲಿವೆ. ಸಾಕಷ್ಟು ಮಳೆ ಬೀಳುವ ಈ ತಾಲ್ಲೂಕಿನ ವಾರ್ಷಿಕ ಸರಾಸರಿ ಮಳೆ 3,550 ಮಿಮೀ. ಬತ್ತ, ಕಬ್ಬು ಮುಖ್ಯಬೆಳೆಗಳು. ಅಡಕೆ, ತೆಂಗು, ಮೆಣಸು ಮುಖ್ಯ ತೋಟದ ಬೆಳೆಗಳು. ಸಮುದ್ರತೀರ ಮತ್ತು ನದೀದಡಗಳಲ್ಲಿ ತೆಂಗು ಮತ್ತು ಅಡಕೆ ಮರಗಳನ್ನು, ಕಣಿವೆಗಳಲ್ಲಿ ತೆಂಗು, ಬಾಳೆ, ಮೆಣಸು ಬೆಳೆಗಳನ್ನೂ ಹೆಚ್ಚಾಗಿ ಕಾಣಬಹುದು. ಗೋಡಂಬಿ, ಮಾವು ಮತ್ತು ಅಲ್ಪ ಪ್ರಮಾಣದಲ್ಲಿ ನೆಲಗಡಲೆ ಬೆಳೆಯೂ ಈ ತಾಲ್ಲೂಕಿನಲ್ಲಿದೆ.

	ಬೆಂಗಳೂರು-ಹೊನ್ನಾವರ, ಮುಂಬಯಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಗಳು ಈ ತಾಲ್ಲೂಕಿನಲ್ಲಿ ಹಾದುಹೋಗುತ್ತವೆ. ಜೊತೆಗೆ ಸುತ್ತಲ ಪಟ್ಟಣಗಳಿಗೆ ಉತ್ತಮ ಮಾರ್ಗ ಸಂಪರ್ಕವಿದೆ. ಹೊನ್ನಾವರದಲ್ಲಿ ಬಂದರು ಇದ್ದು ಜಲಮಾರ್ಗ ಸೌಲಭ್ಯವುಂಟು. 16-17ನೆಯ ಶತಮಾನ ದಲ್ಲಿ ಈ ಬಂದರು ಮೆಣಸಿನ ರಫ್ತಿಗಾಗಿ ಪ್ರಸಿದ್ಧಿಯಾಗಿತ್ತು. ಮಂಕಿಯಲ್ಲಿ ಒಂದು ಚಿಕ್ಕ ಬಂದರಿದೆ. ಇವನ್ನು ಉತ್ತಮಪಡಿಸಲು ಪ್ರಯತ್ನಗಳಾಗು ತ್ತಿವೆ. ಕೆಲವು ಹೆಂಚಿನ ಕಾರ್ಖಾನೆಗಳನ್ನು ಬಿಟ್ಟರೆ ತಾಲ್ಲೂಕಿನಲ್ಲಿ ಭಾರಿ ಕೈಗಾರಿಕೆಗಳಾವುವೂ ಇಲ್ಲ. ಮತ್ಸ್ಯೋದ್ಯಮ ಇಲ್ಲಿಯ ಮುಖ್ಯ ಕಸಬುಗಳಲ್ಲೊಂದು. ಇತ್ತೀಚೆಗೆ ಆಧುನಿಕ ರೀತಿಯಲ್ಲಿ ಅದರ ಅಭಿವೃದ್ಧಿಯಾಗುತ್ತಿದೆ; ತಾಲ್ಲೂಕಿನಲ್ಲಿ ಮೀನುಗಾರರ ತರಬೇತಿ ಕೇಂದ್ರವಿದೆ. ಎಲ್ಲ ಬಗೆಯ ಮೂಲಭೂತ ಸೌಲಭ್ಯಗಳಿವೆ.

	ಯಕ್ಷಗಾನ ಈ ತಾಲ್ಲೂಕಿನ ಒಂದು ವಿಶಿಷ್ಟ ಕಲೆ. ಈ ಕಲೆಗೆ ತಾಲ್ಲೂಕಿನ ಕೊಡುಗೆ ವಿಶಿಷ್ಟವಾದುದು. ರಾಷ್ಟ್ರಪ್ರಶಸ್ತಿವಿಜೇತ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭುಹೆಗಡೆ, ರಾಜ್ಯಪ್ರಶಸ್ತಿವಿಜೇತ ಮೂಡ್ಕಣಿ ನಾರಾಯಣ ಹೆಗಡೆ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಕರ್ಕಿ ಪರಮಯ್ಯ ಹಾಸ್ಯಗಾರ ಮೊದಲಾದವರು ಇಲ್ಲಿಯವರು. ಇಡಗುಂಜಿ ಮಹಾಗಣಪತಿ ಪ್ರಾಸಾದಿತ ಯಕ್ಷಗಾನ ಮಂಡಳಿ, ಕೆರೆಮನೆ, ಶ್ರೀ ಹಾಸ್ಯಗಾರ ಮಂಡಳಿ ಕರ್ಕಿ ಮುಂತಾದ ಕಲಾ ಮಂಡಳಿಗಳಿವೆ. ಗುಂಡಬಾಳ ಊರಿನ ದೇವಸ್ಥಾನವೊಂದರಲ್ಲಿ ಹರಕೆ ಯಕ್ಷಗಾನ ನಿರಂತರ ವಾಗಿರುತ್ತದೆ. ಹೊನ್ನಾವರದ ಗುಡಿಕಾರರ ಗಂಧದ ಕುಸುರಿ ಕೆಲಸ ಪ್ರಸಿದ್ಧವಾದುದು.

ಈ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಹೊನ್ನಾವರದಿಂದ ಸುಮಾರು 3 ಕಿಮೀ ದೂರದಲ್ಲಿರುವ ರಾಮತೀರ್ಥ ಪ್ರಸಿದ್ಧವಾದುದು. ಇಲ್ಲಿಯ ಝರಿನೀರು ಖನಿಜಗುಣಗಳುಳ್ಳದ್ದೆಂದೂ ಈ ತೀರ್ಥದಲ್ಲಿ ಸ್ನಾನ ಮಾಡಿದರೆ ಚರ್ಮವ್ಯಾಧಿಗಳೂ ಹುಚ್ಚೂ ಗುಣವಾಗುವುವೆಂದೂ ಪ್ರತೀತಿ. ಇಲ್ಲಿ ಶ್ರೀರಾಮಲಿಂಗೇಶ್ವರ, ದತ್ತಾತ್ರೇಯ ಮೂರ್ತಿಗಳಿರುವ ಒಂದು ದೇವಾಲಯವಿದೆ. ಹೊನ್ನಾವರದಿಂದ ಸುಮಾರು 5 ಕಿಮೀ ದೂರದಲ್ಲಿ ಸಮುದ್ರ ಮಧ್ಯದಲ್ಲಿರುವ ನಡುಗಡ್ಡೆಯ ಸುತ್ತಲೂ ಕೋಟೆಯಿದ್ದು ಅಲ್ಲಲ್ಲಿ ಗೋಪುರಗಳ ಮೇಲೆ ತೋಪುಗಳನ್ನಿಡಲಾ ಗಿರುವ, ಬಿದನೂರಿನ ಶಿವಪ್ಪನಾಯಕ ಕಟ್ಟಿಸಿದ್ದೆಂದು ಹೇಳುವ ಬಸವರಾಜದುರ್ಗವಿದೆ. ಸಹ್ಯಪರ್ವತದ ಶಿಖರದ ಮೇಲೆ ಹೊನ್ನಾವರ ದಿಂದ ಸುಮಾರು 13 ಕಿಮೀ ದೂರದಲ್ಲಿ ಕರಿಕಾನಪರಮೇಶ್ವರೀ ದೇವಾಲಯವಿದೆ. ಜಗತ್ಕಂಟಕರಾದ ಮಲ್ಲಾಸುರ-ಭಂಗಾಸುರರೆಂಬ ರಾಕ್ಷಸರನ್ನು ನಾಶಮಾಡಿದ ದೇವಿ ಭಕ್ತರ ಪ್ರಾರ್ಥನೆಯ ಮೇರೆಗೆ ಇಲ್ಲಿ ನೆಲಸಿದ್ದಾಳೆಂದು ಪ್ರತೀತಿ. ಇದರ ಸುತ್ತಲೂ 5-6 ಕಿಮೀ ಅರಣ್ಯಪ್ರದೇಶವಿದೆ. ಪ್ರತಿ ಶುಕ್ರವಾರ ಮತ್ತು ಮಂಗಳವಾರ ಹಲವಾರು ಭಕ್ತರು ಆಗಮಿಸುತ್ತಾರೆ. ಹೊನ್ನಾವರದಿಂದ ಪೂರ್ವಕ್ಕೆ 10 ಕಿಮೀ ದೂರದಲ್ಲಿರುವ ಇಡಗುಂಜಿಯ ಎರಡು ಕೈ ಗಣಪತಿ ಪ್ರಸಿದ್ಧ. ಹೊನ್ನಾವರದಿಂದ 29 ಕಿಮೀ ದೂರದಲ್ಲಿರುವ ಗುಂಡಬಾಳ ಹನುಮಂತ ದೇವಾಲಯದಿಂದ ಪ್ರಖ್ಯಾತವಾಗಿದೆ. ಇಲ್ಲಿ ಜೈನ ಗುಡಿಗೋಪುರಗಳೂ ಇವೆ. ರಾವಣ ನಿರ್ಮಿತವೆಂದು ಐತಿಹ್ಯವುಳ್ಳ ಮುರ್ಡೇಶ್ವರ, ಧಾರೇಶ್ವರ, ಗುಣವಂತೇಶ್ವರಗಳು ಹೊನ್ನಾವರದಿಂದ 16 ಕಿಮೀ ಅಂತರದೊಳಗೆ ಇವೆ. ಪ್ರಸಿದ್ಧ ಐತಿಹಾಸಿಕ ಸ್ಥಳವಾದ ಗೇರುಸೊಪ್ಪೆ (ನೋಡಿ- ಗೇರುಸೊಪ್ಪೆ) ಹೊನ್ನಾವರದ ಪೂರ್ವಕ್ಕೆ ಸು. 29 ಕಿಮೀ ದೂರದಲ್ಲಿದೆ. ಹೊನ್ನಾವರದ ಉತ್ತರಕ್ಕೆ ಸುಮಾರು 8 ಕಿಮೀ ದೂರದಲ್ಲಿರುವ ಹಳದೀಪುರದಲ್ಲಿ ಅನೇಕ ದೇವಾಲಯಗಳಿವೆ.

	ಹೊನ್ನಾವರ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಮುಖ್ಯ ಪಟ್ಟಣ. ಶರಾವತಿ ನದಿ ಮುಖಜ ಭೂಮಿಯಲ್ಲಿರುವ ಈ ಪಟ್ಟಣ ಸಮುದ್ರತೀರದಿಂದ 4 ಕಿಮೀ ದೂರದಲ್ಲಿದೆ. ನದಿಯ ಉತ್ತರ ದಂಡೆಯ ಮೇಲೆ ಹರಡಿರುವ ಈ ಊರಿನ ಜನಸಂಖ್ಯೆ 17,833.
	ಹೊನ್ನಾವರದ ಪೂರ್ವಕ್ಕಿರುವ ಆರೊಳ್ಳಿ, ಮುಗ್ವಾ, ಮುಂಡಗೋಡ, ಹೊಸಾಕುಳಿ, ಸಾಲೋಡ ಪಂಚಗ್ರಾಮಗಳು ಅಡಕೆ-ತೆಂಗಿನ ತೋಟಗಳ ತವರಾಗಿವೆ. ಇಲ್ಲಿಯ ಶರಾವತಿ-ಬಡಗಣು ಸಂಗಮದಲ್ಲಿ ಒಂದು ಸುಂದರ ಸರೋವರ ನಿರ್ಮಿತವಾಗಿದ್ದು, ಅಲ್ಲಿ ಸಹಜ ಸುಂದರವಾಗಿ ತೆಂಗಿನ ತೋಟಗಳಿಂದಾವೃತವಾದ ಐದು ನಡುಗಡ್ಡೆಗಳು ಇವೆ.
	ಹೊನ್ನಾವರ ಪಟ್ಟಣ ಅಟ್ಟಳಿಕೆಯಂತಹ ಭೂಮಿಯ ಮೇಲೆ ಹಬ್ಬಿಕೊಂಡಿದೆ. ಮೊದಲನೆಯ ಹಂತ ಶರಾವತಿ ನದಿಯ ಗುಂಟ ಪೂರ್ವ-ಪಶ್ಚಿಮವಾಗಿ ಹಬ್ಬಿದ್ದು ಇದಕ್ಕೆ ಕೆಳಗಿನ ಪಾಳ್ಯ ಎಂದು ಕರೆಯಲಾಗುವುದು. ಇಲ್ಲಿ ಅಡಕೆ-ತೆಂಗಿನ ತೋಟಗಳು, ರೋಮನ್ ಕೆಥೊಲಿಕರ ಸಾನ್-ಸಾಲ್ವಾಡೋ ಚರ್ಚ್, ಬಂದರವಾಡಾ, ಪಶ್ಚಿಮ ಕರಾವಳಿಯ ಹೆದ್ದಾರಿಗೆ ಒಂದು ಮೈಲು ಉದ್ದವಾಗಿ ನಿರ್ಮಿಸಿದ ಶರಾವತಿ ಸೇತುವೆ ಮುಂತಾದವುಗಳಿವೆ. ಇದು ಸುಮಾರು ಮೂರು ಕಿಮೀ ದೂರದ ಕರ್ಕಿಯವರೆಗೂ ಹಬ್ಬಿದೆ. ಈ ಭಾಗದಲ್ಲಿ ದುರ್ಗದ ಕೇರಿ, ಲಕ್ಷ್ಮೀನಾರಾಯಣನ ಗುಡಿ, ಹನುಮಾನ್ ಮಂದಿರ, ವಿಠೋಬ-ರುಖುಮಾಯಿ ಗುಡಿ, ರಾಮೇಶ್ವರ ದೇವಾಲಯಗಳು, ಸೇಂಟ್ ಥಾಮಸ್ ಹೈಯರ್ ಸೆಕೆಂಡರಿ ಶಾಲೆ ಮುಂತಾದವುಗಳಿವೆ. ಎರಡನೆಯ ಹಂತ ಸ್ವಲ್ಪ ಎತ್ತರದ್ದಾಗಿದ್ದು, ಈ ಭಾಗದಲ್ಲಿ ವೆಂಕಟರಮಣ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಶ್ರೀರಾಮನವಮಿಯಂದು ಜಾತ್ರೆಯಾಗುತ್ತದೆ. ಇದಲ್ಲದೆ ಶಾರದಾಂಬಾ ದೇವಸ್ಥಾನ, ಹನುಮಂತನ ಎರಡು ಮಂದಿರಗಳು, ಹತ್ತುಜನರ ಮಠ, ಕಿರುಕುಳ ವ್ಯಾಪಾರದ ಪೇಟೆ, ಮಸೀದಿ, ಪ್ರವಾಸಿಮಂದಿರ ಮತ್ತು ದೀಪಸ್ತಂಭಗಳು ಇಲ್ಲಿವೆ. ನಗರದ ಮೂರನೆಯ ಹಂತ ಪೂರ್ವಕ್ಕೆ ಉನ್ನತ ಪ್ರದೇಶದಲ್ಲಿದ್ದು ಆ ಭಾಗವನ್ನು ಪ್ರಭಾತ ನಗರವೆಂದು ಕರೆಯುತ್ತಾರೆ. ಬೆಂಗಳೂರು-ಹೊನ್ನಾವರ ಹೆದ್ದಾರಿ ಇಲ್ಲಿ ಹಾದುಹೋಗಿದ್ದು ಈ ಭಾಗದಲ್ಲಿ ಕಲಾವಿಜ್ಞಾನ ಕಾಲೇಜು, ಕಾನ್ವೆಂಟ್, ಕರ್ನಲ್ ಹಿಲ್ ಮುಂತಾದವುಗಳಿವೆ.

	ಹೊನ್ನಾವರದಲ್ಲಿ ನೈಸರ್ಗಿಕ ಬಂದರು ಇದ್ದು ವಸ್ತುಸಾಗಾಣಿಕೆಗೆ ಭೂ-ಜಲ ಮಾರ್ಗಗಳ ಅನುಕೂಲತೆಯಿದೆ. ಹೊನ್ನಾವರದಿಂದ ಒಂದೂವರೆ ಕಿಮೀ ದೂರದ ಕಾಸರಗೋಡಿನಲ್ಲಿ ಎರಡು ಹಾಗೂ ಮಾವಿನಕುರ್ವೆಯಲ್ಲಿ ಒಂದು ಹೆಂಚಿನ ಕಾರ್ಖಾನೆಗಳಿವೆ. ಇಲ್ಲಿಯ ಶ್ರೀಗಂಧ ಕೆತ್ತನೆಗೆ ಭಾರೀ ಬೇಡಿಕೆಯಿದೆ. ಸುತ್ತಲೂ ವನಸಿರಿ ಹೇರಳವಾಗಿರುವುದರಿಂದ ನಾಲ್ಕು ಮರ ಕೊಯ್ಯುವ ಮಿಲ್ಲುಗಳಿವೆ. ಒಂದು ಬೆಲ್ಲದ ಕಾರ್ಖಾನೆಯಿದೆ. ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಇಲ್ಲಿ ಒಂದು ಮೀನುಗಾರಿಕೆಯ ಶಾಲೆ ಹಾಗೂ ತರಬೇತಿ ಕೇಂದ್ರವಿದೆ.

	ಹೊನ್ನಾವರದ ಬಂದರು 15ನೆಯ ಶತಮಾನದಲ್ಲೇ ಪ್ರಖ್ಯಾತವಾಗಿತ್ತು. 16ನೆಯ ಶತಮಾನದಲ್ಲಿ ಇಲ್ಲಿ ಪೋರ್ಚುಗೀಸ್ ಹಾಗೂ ಇಂಗ್ಲಿಷರ ವ್ಯಾಪಾರೀ ಸಂಸ್ಥೆಗಳಿದ್ದವು. 1444ರಲ್ಲಿ ಪರ್ಷಿಯನ್ ರಾಯಭಾರಿ ಅಬ್ದುಲ್ ರಜಾಕ್ ಈ ಬಂದರಿನ ಮುಖಾಂತರವೇ ವಿಜಯನಗರಕ್ಕೆ ಪ್ರಯಾಣಮಾಡಿದ್ದ. 1503ರಲ್ಲಿ ವಾಸ್ಕೋ ಡ-ಗಾಮಾನಿಂದ, 1785ರಲ್ಲಿ ಟಿಪ್ಪು ಸುಲ್ತಾನನಿಂದ ಹೊನ್ನಾವರ ದಾಳಿಗೀಡಾದರೂ ಮತ್ತೆ ಉಳಿದು ಬೆಳೆದು ಬಂದಿದೆ.

	ಈ ಊರನ್ನು ಡಚ್ಚರು ಒನೋರ ಎಂದೂ, ಹೆಮಿಲ್ಟನ್ ಒನಾರ ಎಂದೂ ಅಲ್ಬುಕರ್ಕ್ ಹೊನೋರ ಎಂದೂ ಕರೆದಿದ್ದಾರೆ. 1381ರ ಶಿಲಾಲೇಖವೊಂದರಲ್ಲಿ ಹೊನ್ನಾಉರಾ ಎಂದಿದೆ. ಸು. 800ರಲ್ಲಿ ಈ ಸ್ಥಳವನ್ನಾಳಿದ ಹೊನ್ನಮ್ಮನ ಹೆಸರಿನಿಂದ ಈ ಸ್ಥಳಕ್ಕೆ ಹೊನ್ನಾವರ ಎಂಬ ಹೆಸರು ಬಂತೆಂದು ಪ್ರತೀತಿ.

	ಹೊನ್ನಾವರ ಬನವಾಸಿಯ ಕದಂಬರ ಆಳಿಕೆಯಲ್ಲಿತ್ತು (150-600). ಆಮೇಲೆ ಚಳುಕ್ಯರ, ರಾಷ್ಟ್ರಕೂಟರ ಆಧಿಪತ್ಯಕ್ಕೆ ಸೇರಿತು. ವಿಜಯನಗರ ಸಾಮ್ರಾಜ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಅಲ್ಲಿಯ ಅರಸರು ಹೊನ್ನಾವರ ಬಂದರನ್ನು ತಮ್ಮ ವಶಕ್ಕೆ ತೆಗೆದುಕೊಂಡು ಈ ಬಂದರಿನಿಂದಲೇ ಪಶ್ಚಿಮ ಏಷ್ಯದಿಂದ ಕುದುರೆಗಳನ್ನು ತರಿಸಿಕೊಳ್ಳುತ್ತಿ ದ್ದರು. ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಪತನವಾದ ಬಳಿಕ ಹೊನ್ನಾವರ ಬಿದನೂರಿನ ನಾಯಕರ ಆಡಳಿತಕ್ಕೆ ಸೇರಿತು. ಇಲ್ಲಿಯ ವೆಂಕಟರಮಣ ದೇವಾಲಯಕ್ಕೆ ಉಂಬಳಿಕೊಟ್ಟ ಕೆಳದಿ ಶಿವಪ್ಪನಾಯಕನ ಮಗ ಭದ್ರಪ್ಪನಾಯಕನ 1663ರ ಶಾಸನ ದೇವಾಲಯದಲ್ಲಿದೆ. 18ನೆಯ ಶತಮಾನದಲ್ಲಿ ಹೈದರ್ ಅಲಿಯ ಕೈಸೇರಿದ ಈ ಪಟ್ಟಣ ನಾಲ್ಕು ದಶಕಗಳ ಕಾಲ ಮೈಸೂರಿನ ಆಡಳಿತದಲ್ಲಿದ್ದು ಟಿಪ್ಪುವಿನ ಮರಣಾನಂತರ ಬ್ರಿಟಿಷರ ವಶವಾಯಿತು. ಬ್ರಿಟಿಷರು ದಕ್ಷಿಣ ಮತ್ತು ಉತ್ತರ ಕನ್ನಡ ಜಿಲ್ಲೆಯನ್ನು ಮದರಾಸು ಪ್ರಾಂತಕ್ಕೆ ಸೇರಿಸಿದಾಗ ಹೊನ್ನಾವರ ಉತ್ತರ ಕನ್ನಡ ಜಿಲ್ಲೆಯ ಕೇಂದ್ರವಾಗಿತ್ತು.						
		(ವಿ.ಎನ್.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ